ಪ್ಯಾರಾಥೈರಾಯ್ಡ್ ಗ್ರಂಥಿಗಳು -
ಗಂಟಲಿನಲ್ಲಿ ಶ್ವಾಸನಾಳದ ಪ್ರಾರಂಭ ಭಾಗವನ್ನು ಹೊದ್ದುಕೊಂಡಿರುವ ಥೈರಾಯ್ಡ್ ಗ್ರಂಥಿಯ ಹಿಂಭಾಗಕ್ಕೆ ಅಂಟಿಕೊಂಡು ಅಕ್ಕಿಕಾಳಿನ ಆಕಾರಕ್ಕಿರುವ ನಾಲ್ಕು ನಿರ್ನಾಳಗ್ರಂಥಿಗಳು. ಆಂಫಿಯಾಕ್ಸಿಸ್ಸಿನಲ್ಲಿ ಮೊತ್ತಮೊದಲಾಗಿ ಗುರುತಿಸಲ್ಪಡುವಂತಿದ್ದು, ಕಶೇರುಕಗಳಲ್ಲಿ ಹೆಚ್ಚುಹೆಚ್ಚಾಗಿ ವಿಕಾಸವಾಗಿರುವ ಈ ಗ್ರಂಥಿಗಳು ಸಸ್ತನಿಗಳಲ್ಲಿ ಅವು ಜೀವಂತವಾಗಿರುವುದಕ್ಕೆ ಅತ್ಯಗತ್ಯವಾಗಿರುವಷ್ಟು ಮಾತ್ರ ಕ್ರಿಯಾತ್ಮಕ ಅಭಿವೃದ್ಧಿ ಪಡೆದಿವೆ. ಇವು ಸ್ರವಿಸುವ ಪ್ಯಾರಾಥಾರ್ಮೊನ್ ಎಂಬ (ಪ್ರೋಟೀನ್ ಗುಂಪಿಗೆ ಸೇರಿದ) ಹಾರ್ಮೋನ್, ರಕ್ತದಲ್ಲಿಯ ಕ್ಯಾಲ್ಸಿಯಮ್ ಅಯಾನಿನ ಮಟ್ಟವನ್ನು ನಿಯಂತ್ರಿಸುತ್ತದೆ. 
ಪ್ಯಾರಾಥಾರ್ಮೋನಿನ ಅಭಾವದಿಂದ (ಅರ್ಥಾತ್ ಪ್ಯಾರಾಥೈರಾಯ್ಡ್ ಗ್ರಂಥಿಗಳ ಕ್ರಿಯೆಯ ಕೊರತೆಯಿಂದ) ರಕ್ತದಲ್ಲಿ ಕ್ಯಾಲ್ಸಿಯಮ್ ಅಯಾನಿನ ಮಟ್ಟ ಬಹಳ ತಗ್ಗುತ್ತದೆ. ತತ್ಫಲವಾಗಿ ಸ್ನಾಯು ಹಾಗೂ ನರಗಳು ಬಲು ಸುಲಭವಾಗಿ ಉದ್ರೇಕಗೊಂಡು ದೇಹದ ನಾನಾ ಭಾಗಗಳಲ್ಲಿ ಸ್ನಾಯುಗಳು ಅನೈಚ್ಛಿಕವಾಗಿ ಸೆಟೆದುಕೊಳ್ಳುತ್ತವೆ. ಇದರಿಂದ ಶಕ್ತಿಗುಂದಿ ಇಲ್ಲವೇ ಉಸಿರು ನಿಂತುಹೋಗಿ ಮರಣ ಸಂಭವಿಸುವುದು ಖಂಡಿತ. ಟೆಟನಿ ಎಂದು ಕರೆಯಲಾಗಿರುವ ಈ ತೀವ್ರ ಪರಿಸ್ಥಿತಿಗೆ ತುರ್ತುಚಿಕಿತ್ಸೆ ಅಗತ್ಯ. ಕ್ಯಾಲ್ಸಿಯಮ್ ಗ್ಲೂಕೊನೇಟನ್ನು ಚುಚ್ಚುಮದ್ದಾಗಿ ಅಭಿಧಮಿನಿಯ ಮೂಲಕ ಆಗಾಗ ಕೊಡುವುದು ತಾತ್ಕಾಲಿಕ ಕ್ರಮ. ಪ್ಯಾರಾಥಾರ್ಮೋನನ್ನು ಪದೇ ಪದೇ ಚುಚ್ಚುಮದ್ದಾಗಿ ಕೊಡುವುದು ಇದಕ್ಕಿಂತ ಉತ್ತಮ, ಒಗ್ಗುವ ಪ್ಯಾರಾಥೈರಾಯ್ಡ್ ಗ್ರಂಥಿಯನ್ನು ನಾಟಿ ಹಾಕುವುದು ಶ್ರೇಷ್ಠ ಮಾರ್ಗ. 

ಇತರ ಪ್ರಾಣಿಗಳಲ್ಲಿ ಪ್ಯಾರಾಥೈರಾಯ್ಡ್ ಗ್ರಂಥಿಗಳು 2-8 ಇರಬಹುದಾದರೂ ಮನುಷ್ಯರಲ್ಲಿ ಸಾಮಾನ್ಯವಾಗಿ 4 ಇರುತ್ತವೆ. ಪ್ರತಿಯೊಂದು ಗ್ರಂಥಿಯೂ 6 ( 4 ( 2 ಘಮಿಮೀನಷ್ಟು ಇರುತ್ತದೆ. ಅಪರೂಪವಾಗಿ ಥೈರಾಯ್ಡ್ ಗ್ರಂಥಿಯ ಒಳಗೇ ಒಂದೆರಡು ಪ್ಯಾರಾಥೈರಾಯ್ಡ್ ಗ್ರಂಥಿಗಳು ಹುದುಗಿರಬಹುದು. ಹಾಗೆಯೇ ಥೈಮಸ್‍ಗ್ರಂಥಿಯ ಒಳಗೆ ಹುದುಗಿರುವುದೂ ಉಂಟು. ಕಾರಣ, ಭ್ರೂಣಾವಸ್ಥೆಯಲ್ಲಿ ಇವೆಲ್ಲವೂ ಸಂಬಂಧಿತ ಆಕರಗಳಿಂದ ವಿಕಾಸವಾದವು. ಇದೇ ಕಾರಣದಿಂದ ಕೆಲವುವೇಳೆ ಪ್ಯಾರಾಥೈರಾಯ್ಡ್ ಕೋಶಗಳು ಥೈರಾಯ್ಡ್ ಕೋಶಗಳಂತೆಯೇ ಕಲಾಯ್ಡ್ ಎಂಬ ಮಂದ ದ್ರವದಿಂದ ಕೂಡಿದ ಗೂಡುಗಳಂತೆ (ಫಾಲಿಕಲ್ಸ್) ಅಳವಡಿಕೆಗೊಂಡಿರಬಹುದಾದರೂ ಸಾಧಾರಣವಾಗಿ ಅವು ಪರಸ್ಪರ ಹೆಣೆದುಕೊಂಡಿರುವ ಡೊಂಕುಡೊಂಕಾದ ಸಣ್ಣರಕ್ತನಾಳಗಳನ್ನು ಆವರಿಸಿಕೊಂಡು ಡೊಂಕುಕಡ್ಡಿಗಳಂತೆ ಅಳವಡಿಕೆಗೊಂಡಿರುತ್ತವೆ. ಪ್ಯಾರಾಥೈರಾಯ್ಡ್ ಗ್ರಂಥಿಯಲ್ಲಿ ಎರಡು ಬಗೆಯ ಕೋಶಗಳುಂಟು. ಪ್ರಧಾನವಾಗಿರುವವು ತಿಳಿಯಾದ ಸಣ್ಣಕೋಶಗಳು (ಚೀಫ್‍ಸೆಲ್ಸ್). ಪ್ಯಾರಾಥಾರ್ಮೋನನ್ನು ಉತ್ಪಾದಿಸಿ ನೆರೆಯಲ್ಲಿ ಇರುವ ರಕ್ತನಾಳಗಳಿಗೆ ಸ್ರವಿಸುವ ಕೋಶಗಳು ಇವೇ. ಇನ್ನೊಂದು ಬಗೆಯವು ಇಯೋಸಿನೋಫಿಲುಗಳೆಂಬ ಕೆಂಪುವರ್ಣ ಒಲವಿರುವ ಕೋಶಗಳು. ಇವು ಅಲ್ಪಸಂಖ್ಯೆಯಲ್ಲಿ ಇರುತ್ತವೆ. ಇವುಗಳ ಕ್ರಿಯೆ ಖಚಿತವಾಗಿ ಏನೆಂದು ತಿಳಿಯದು. 

ಹತ್ತೊಂಬತ್ತನೆಯ ಮಧ್ಯದಶಕಗಳಲ್ಲಿ ಥೈರಾಯ್ಡ್ ಗ್ರಂಥಿಯ ಪ್ರಾರಂಭಿಕ ಪ್ರಾಯೋಗಿಕ ವ್ಯಾಸಂಗಗಳು ಜರುಗುತ್ತಿದ್ದಾಗ, ಈ ಗ್ರಂಥಿಯನ್ನು ತೆಗೆದುಹಾಕಿಬಿಟ್ಟರೆ ಪ್ರಾಣಿ ಜೀವಂತವಿರದು ಎಂಬ ಭಾವನೆ ಇತ್ತು. ವಾಸ್ತವವಾಗಿ ಪ್ರಯೋಗದಲ್ಲಿ ಪ್ರಾಣಿ ಸತ್ತುಹೋಗುತ್ತಿದ್ದುದು ಥೈರಾಯ್ಡ್ ಗ್ರಂಥಿಯ ನಿರ್ಮೂಲನದಿಂದ ಅಲ್ಲ, ಆ ತನಕ ಗೊತ್ತೇ ಇರದಿದ್ದ ಪ್ಯಾರಾಥೈರಾಯ್ಡ್ ಗ್ರಂಥಿಗಳೂ ಇಂಥ ಪ್ರಯೋಗದಲ್ಲಿ ನಿರ್ಮೂಲನಗೊಳ್ಳುತ್ತಿದ್ದುದರಿಂದ. ಈ ವಿಷಯ ಮುಂದೆ 10-20 ವರ್ಷಗಳಲ್ಲೇ ಮನದಟ್ಟು ಆಯಿತು. ಪ್ಯಾರಾಥೈರಾಯ್ಡ್ ಗ್ರಂಥಿಗಳು ಉಳಿದಿರುವಂತೆ ಎಚ್ಚರಿಕೆ ತೆಗೆದುಕೊಂಡು ಥೈರಾಯ್ಡ್ ನಿರ್ಮೂಲನ ಪ್ರಯೋಗವನ್ನು ಮಾಡಿದಾಗ ಪ್ರಾಣಿಗಳು ಜೀವಸಹಿತ ಇರುತ್ತಿದ್ದುವಲ್ಲದೆ ಅವುಗಳಲ್ಲಿ ಕೇವಲ ಥೈರಾಯ್ಡ್ ಗ್ರಂಥಿಯ ಕೊರತೆಯಿಂದ ಉದ್ಭವಿಸುವ ಲಕ್ಷಣಗಳು ಮಾತ್ರ ಕಂಡುಬರುತ್ತಿದ್ದುವು. ಅದೇ ಥೈರಾಯ್ಡನ್ನು ಉಳಿಸಿ ಪ್ಯಾರಾಥೈರಾಯ್ಡುಗಳನ್ನು ನಿರ್ಮೂಲನಗೊಳಿಸಿದರೆ ನಾಲ್ಕಾರುದಿನಗಳಲ್ಲಿ ಅಥವಾ ಇನ್ನೂ ಮುಂಚೆಯೇ ಪ್ರಾಣಿ ಅಸು ನೀಗುತ್ತಿತ್ತು. ಪ್ಯಾರಾಥೈರಾಯ್ಡ್ ಗ್ರಂಥಿಗಳನ್ನು ತೆಗೆದುಹಾಕಿದಾಗ ರಕ್ತದಲ್ಲಿ ಕ್ಯಾಲ್ಸಿಯಮ್ಮಿನ ಮಟ್ಟ ಕಡಿಮೆ ಆಗುತ್ತದೆ. (< 10 ಮಿ. ಗ್ರಾಮ್ %) ಎಂದು 1908 ರಲ್ಲಿ ತೋರಿಸಲಾಯಿತು ; ಮತ್ತು ಕ್ಯಾಲ್ಸಿಯಮ್ ಲವಣಗಳನ್ನು ಚುಚ್ಚುಮದ್ದಿನ ರೀತಿ ಪ್ರಯೋಗಿಸಿದಾಗ ಪ್ಯಾರಾಥೈರಾಯ್ಡ್ ನಿರ್ಮೂಲನದಿಂದ ಉಂಟಾಗಿದ್ದ ಎಲ್ಲ ತೊಂದರೆಗಳೂ ಮಾಯವಾಗುತ್ತವೆ ಎಂದೂ ವಿಶದಪಟ್ಟಿತು. ಪ್ಯಾರಾಥೈರಾಯ್ಡ್ ಗ್ರಂಥಿಯ ಸಾರದಿಂದ ಕಚ್ಚಾ ಹಾರ್ಮೋನನ್ನು ಪ್ರತ್ಯೇಕಿಸಿ ಅದಕ್ಕೆ ಪ್ಯಾರಾಥಾರ್ಮೋನ್ ಎಂದು ಹೆಸರಿಡಲಾಯಿತು (1925).

ದೇಹದಲ್ಲಿ ಪ್ಯಾರಾಥೈರಾಯ್ಡ್ ಗ್ರಂಥಿಗಳ ಎಸಗುವ ಕಾರ್ಯವೇನೆಂಬುದು ಖಚಿತವಾಗಿ ತಿಳಿದಿಲ್ಲವಾದರೂ ರಕ್ತದಲ್ಲಿ ಕ್ಯಾಲ್ಸಿಯಮ್ಮಿನ ಮಟ್ಟದ ನಿಯಂತ್ರಣ ಒಂದು ಪ್ರಮುಖ ಕಾರ್ಯವೆಂದು ವ್ಯಕ್ತಪಟ್ಟಿದೆ. ಕಾರಣಾಂತರದಿಂದ ಕ್ಯಾಲ್ಸಿಯಮ್ಮಿನ ಮಟ್ಟ ಕಡಿಮೆ ಆದಾಗ ನರಸ್ನಾಯುಗಳು ಶೀಘ್ರೋದ್ರೇಕಿಗಳಾಗಿ ಟೆಟನಿ ರೋಗದಲ್ಲಿಯಂತೆ ಕೈಕಾಲುಗಳ ಸ್ನಾಯುಗಳು ಸೆಟೆದುಕೊಳ್ಳುವಂಥ ತೀವ್ರ ಪರಿಸ್ಥಿತಿ ಉದ್ಭವಿಸಬಹುದು. ಆಗ ಪ್ಯಾರಾಥೈರಾಯ್ಡ್ ಗ್ರಂಥಿಗಳು ಹೆಚ್ಚು ಹೆಚ್ಚಾಗಿ ಸ್ರವಿಸಿ ರಕ್ತದ ಕ್ಯಾಲ್ಸಿಯಮ್ ಮಟ್ಟ ಹೆಚ್ಚಾಗುವಂತೆ ಮಾಡಿ ಈ ಪರಿಸ್ಥಿತಿಯಿಂದ ವ್ಯಕ್ತಿಯನ್ನು ಪಾರುಮಾಡುತ್ತವೆ. ಹಾಗೆಯೇ ಕಾರಣಾಂತರದಿಂದ ರಕ್ತದಲ್ಲಿ ಕ್ಯಾಲ್ಸಿಯಮ್ಮಿನ ಮಟ್ಟ ಹೆಚ್ಚಾದರೆ ಉದ್ಭವಿಸಬಹುದಾದ ತೊಂದರೆಗಳೂ ಪ್ಯಾರಾಥೈರಾಯ್ಡ್ ಗ್ರಂಥಿಗಳಿಂದಲೇ ನಿವಾರಿಸಲ್ಪಡುತ್ತವೆ. ಈ ಸಂದರ್ಭದಲ್ಲಿ ಪ್ಯಾರಾಥೈರಾಯ್ಡುಗಳ ಕ್ರಿಯೆ ಮಂದವಾಗಿ ಇಲ್ಲವೇ ಸ್ಥಗಿತವಾಗಿ ಹೋಗುತ್ತದೆ. ಇದರ ಪರಿಣಾಮವಾಗಿ ರಕ್ತದಲ್ಲಿಯ ಹೆಚ್ಚುವರಿ ಕ್ಯಾಲ್ಸಿಯಮ್ ಇಳಿಮುಖವಾಗುತ್ತದೆ. ಕೇವಲ ಕ್ಯಾಲ್ಸಿಯಮ್ ಮಟ್ಟದಿಂದಲೇ ಪ್ಯಾರಾಥೈರಾಯ್ಡ್ ಗ್ರಂಥಿಗಳ ಚಟುವಟಿಕೆ ನಿಯಂತ್ರಿತವಾಗಿ ಅದರ ಪರಿಣಾಮವಾಗಿಯೇ ರಕ್ತದಲ್ಲಿ ಕ್ಯಾಲ್ಸಿಯಮ್ಮಿನ ಮಟ್ಟ ನಿಯಂತ್ರಿತವಾಗುವುದು ಕೌತುಕವಾದ ನೈಸರ್ಗಿಕ ಸ್ವಯಂ ನಿಯಂತ್ರಣ ಕ್ರಮಗಳಲ್ಲಿ (ಆಟೋರೆಗ್ಯುಲೇಶನ್) ಒಂದು. ರಕ್ತದಲ್ಲಿ ಕೊರತೆ ಬಿದ್ದ ಕ್ಯಾಲ್ಸಿಯಮ್ಮಿನ ಮಟ್ಟವನ್ನು ಏರಿಸಲು ಪ್ಯಾರಾಥಾರ್ಮೋನ್ ಮೂಳೆಗಳ ಮೇಲೆ ಪ್ರಭಾವ ಬೀರಿ ಅವುಗಳ ಕ್ಯಾಲ್ಸಿಯಮ್ ಲವಣ ರಕ್ತಗತವಾಗುವಂತೆ ಮಾಡುತ್ತದೆ. ಮೂತ್ರಪಿಂಡಗಳ ಮೇಲಿನ ಪ್ರಭಾವದಿಂದಲೂ ಇಂಥದೇ ಅಂತಿಮ ಪರಿಣಾಮ ಉಂಟಾಗುತ್ತದೆ. ರಕ್ತದ ಕ್ಯಾಲ್ಸಿಯಮ್ಮಿನ ಹೆಚ್ಚುವರಿ ಮಟ್ಟವನ್ನು ಕಡಿಮೆ ಮಾಡಲು ಪ್ಯಾರಾಥಾರ್ಮೋನ್ ಕಡಿಮೆ ಆಗಿ ಮೂತ್ರಪಿಂಡಗಳ ಮೇಲೆ ಕಡಿಮೆ ಪ್ರಭಾವ ಬೀರುತ್ತದೆ. ಆದ್ದರಿಂದ ಮೂತ್ರದಲ್ಲಿ ಇನಾಗ್ರ್ಯಾನಿಕ್ ಫಾಸ್ಪೇಟುಗಳು ಕಡಿಮೆ ವಿಸರ್ಜಿತವಾಗುತ್ತವೆ. ತತ್ಫಲವಾಗಿ ರಕ್ತದಲ್ಲಿ ಫಾಸ್ಪೇಟುಗಳ ಮಟ್ಟ ಹೆಚ್ಚಾಗುತ್ತದೆ. ರಕ್ತದ ಫಾಸ್ಪೇಟ್ ಮಟ್ಟಕ್ಕೂ ಕ್ಯಾಲ್ಸಿಯಮ್ ಮಟ್ಟಕ್ಕೂ ಪರಸ್ಪರ ವ್ಯತಿರಿಕ್ತ ಸಂಬಂಧ ಇರುವುದರಿಂದ ಆ ಕೂಡಲೇ ರಕ್ತದಲ್ಲಿ ಕ್ಯಾಲ್ಸಿಯಮ್ಮಿನ ಮಟ್ಟ ತಗ್ಗುತ್ತದೆ. ಬಹುಶಃ ಕ್ಯಾಲ್ಸಿಯಮ್ ಹೆಚ್ಚು ವಿಸರ್ಜಿತವಾಗುತ್ತದೆ, ಮತ್ತು ಅದು ಮೂಳೆ ಸೇರಿ ಅಲ್ಲಿ ದಾಸ್ತಾನಾಗುತ್ತದೆ.

ಪ್ಯಾರಾಥೈರಾಯ್ಡ್ ರೋಗಗಳಿಂದ ಹೆಚ್ಚು ಇಲ್ಲವೇ ಕಡಿಮೆಯಾಗಿ ಪ್ಯಾರಾಥಾರ್ಮೋನ್ ಉತ್ಪತ್ತಿ ಆಗುವುದೂ ಇದೆ. ಕಡಿಮೆ ಉತ್ಪಾದನೆಯಿಂದ (ಹೈಪೊಪ್ಯಾರಾಥೈರಾಯ್ಡಿಸಮ್) ಟೆಟನಿ ಉಂಟಾಗುವುದನ್ನೂ ಅದರ ಚಿಕಿತ್ಸೆಯನ್ನೂ ಮೇಲೆ ಹೇಳಿದೆ. ಕೆಲವು ಕಾಲ ವ್ಯಕ್ತಿಯಲ್ಲಿ ಚಿತ್ತಗೆಡಿಕೆ (ಡಿಮೆನ್‍ಷಿಯ) ಉಂಟಾಗುವುದೂ ಇದೆ. ಟೆಟನಿಯಲ್ಲಿ ದೇಹದ ಸ್ನಾಯುಗಳು ನಿರಂತರವಾಗಿ ಸೆಟೆದುಕೊಳ್ಳುತ್ತಿರುವುದರಿಂದ ಅಗಾಧ ಶ್ರಮವಾಗಿ ರೋಗಿ ಶಕ್ತಿಗುಂದಿ ಸತ್ತುಹೋಗಬಹುದು. ಇಲ್ಲವೆ ಧ್ವನಿಪೆಟ್ಟಿಗೆಯಲ್ಲಿಯ ಸ್ನಾಯುಗಳು ಸೆಟೆದುಕೊಳ್ಳುವುದರಿಂದ ಉಸಿರಾಟಕ್ಕೆ ಅಡಚಣೆ ಆಗಿ ವ್ಯಕ್ತಿ ಉಸಿರುಕಟ್ಟಿಯೇ ಸಾಯಬಹುದು. ಪ್ಯಾರಾಥಾರ್ಮೋನಿನ ಹೆಚ್ಚು ಉತ್ಪಾದನೆಯಿಂದ (ಹೈಪರ್‍ಪ್ಯಾರಾಯ್ಡಿಸಮ್) ರಕ್ತದಲ್ಲಿ ಕ್ಯಾಲ್ಸಿಯಮ್ಮಿನ ಮಟ್ಟ ಏರಿದಾಗ ಮನೋದ್ರೇಕ (ಇರಿಟೆಬಿಲಿಟಿ), ಮತ್ತು ಮಾನಸಿಕ ವಿಕಲ್ಪಗಳು (ಮೆಂಟಲ್ ಡಿಸ್ಪರ್ಬೆನ್ಸಸ್) ಉಂಟಾಗುವುವಲ್ಲದೆ ಮೂತ್ರಪಿಂಡ, ಮೂತ್ರನಾಳ, ಮೂತ್ರಕೋಶ ಇವುಗಳಲ್ಲಿ ಕಲ್ಲುಗಳು ಉತ್ಪತ್ತಿಯಾಗಿ ಬೆಳೆಯುವಂತೆಯೂ ಆಗುತ್ತವೆ. ಕಣ್ಣುಗಳಲ್ಲಿ ಅಕಾಲಿಕ ಪೊರೆ (ಕ್ಯಾಟರಾಕ್ಟ್) ಉಂಟಾಗಬಹುದು. ಭೇದಿ ನಿಶ್ಯಕ್ತಿಗಳಿಂದ ಬಿದ್ದೇಳುವುದೂ ಅಕಾಲದಲ್ಲಿ ಮೂಳೆಗಳು ಸುಲಭವಾಗಿ ಮುರಿದುಹೋಗುವುದೂ ಉಂಟು. ಹೆಚ್ಚು ಉತ್ಪಾದನೆ ಮಾಡುತ್ತಿರುವ ಪ್ಯಾರಾಥೈರಾಯ್ಡ್ ಗ್ರಂಥಿಗಳನ್ನು ಶಸ್ತ್ರಕ್ರಿಯೆಯಿಂದ ಅವಶ್ಯವಿದ್ದಷ್ಟು ಮಾತ್ರ ತೆಗೆದುಹಾಕಬೇಕಾದುದು ಯುಕ್ತ ಚಿಕಿತ್ಸೆ.

	ಕ್ಯಾಲ್ಸಿಟೋನಿಸ್ : ಥೈರಾಯ್ಡ್‍ಗ್ರಂಥಿಯಲ್ಲಿಯ ಆ ಕಣಗಳಿಂದ ಉತ್ಪತ್ತಿಯಾಗುವ ರಸದೂತ ಕ್ಯಾಲ್ಸಿಟೋನಿಸ್. ಈ ಆ ಕಣಗಳು ಪಾರಾಥೈರಾಯ್ಡ್ ಗ್ರಂಥಿಗಳಲ್ಲೂ ಇರುತ್ತವೆ.ಯೆಂದು ತಿಳಿದುಬಂದಿದೆ. ಪಾರಾಥಾರ್ಮೋನಕ್ಕೆ ಎದುರಾಳಿಯಂತೆ ಕೆಲಸ ನಿರ್ವಹಿಸುವ ಕ್ಯಾಲ್ಸಿಟೋನಿಸ್ ಕ್ರಿಯೆಯಿಂದ ರಕ್ತದೊಳಗಿನ ಹಾಗೂ ಮೂಳೆಗಳೊಳಗಿನ ಕ್ಯಾಲ್ಸಿಯಂ ಪ್ರಮಾಣ ಸಮಪ್ರಮಾಣದಲ್ಲಿಡಲು ಸಹಕಾರಿಯಾಗಿದೆ. ಕ್ಯಾಲ್ಸಿಟೋನಿಸ್‍ನ ಪ್ರಮುಖ ಕ್ರಿಯೆಯೆಂದರೆ, 1. ಮೂಳೆಗಳಿಂದ ಕ್ಯಾಲ್ಸಿಯಂ ಕರಗಿಹೋಗುವುದನ್ನು ತಡೆಯುವುದು ಮತ್ತು 2. ಮೂತ್ರಪಿಂಡಗಳಿಂದ ಕ್ಯಾಲ್ಸಿಯಂ ಹೀರಿಕೆಯನ್ನು ಕಡಿಮೆಗೊಳಿಸುವುದು. ವೃದ್ದರಲ್ಲಿ ಕಂಡುರುವ ಪೊಳ್ಳು ಮೂಳೆಯ ಚಿಕಿತ್ಸೆಗೆ ಕ್ಯಾಲ್ಸಿಟೋನಿನ ಬಳಸುವುದುಂಟು.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ